ವಾಕ್ಯಗಳು ಕನ್ನಡ ವ್ಯಾಕರಣ – Vakyagalu

Check out Kannada Vakyagalu in kannada , ಕನ್ನಡ ವಾಕ್ಯಗಳು ( Kannada Vakyagalu).

ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ವಾಕ್ಯಗಳು ( Kannada Vakyagalu) ತಿಳಿದುಕೊಳ್ಳೋಣ.

ವಾಕ್ಯಗಳು:

ನಾವು ನಮ್ಮ ಮನಸ್ಸಿನ ಅಭಿಪ್ರಾಯಗಳನ್ನು ಇತರರಿಗೆ ಮಾತುಗಳ ಮೂಲಕ ತಿಳಿಯಪಡಿಸು ತ್ತೇವೆ. ಅಥವಾ ಬರೆವಣಿಗೆಯಿಂದ ತಿಳಿಯಪಡಿಸುತ್ತೇವೆ.

 •  ಮಗುವು ಓಡಿತು.
 • ದೇವರು ಲೋಕವನ್ನು ಕಾಪಾಡುವನು.
 • ಭೀಮನಿಂದ ಬಕಾಸುರನು ಕೊಲ್ಲಲ್ಪಟ್ಟನು.

ಹೀಗೆ ಮೇಲೆ ಹೇಳಿರುವ ವಾಕ್ಯಗಳೆಲ್ಲ ಒಂದು ಸಂಪೂರ್ಣಾರ್ಥವನ್ನು ಕೊಡತಕ್ಕವುಗಳು. ಈ ವಾಕ್ಯಗಳಲ್ಲಿ ಒಂದೊಂದು ಪದವು ಇಲ್ಲದಿದ್ದರೂ ಅರ್ಥವು ಪೂರ್ಣವಾಗದೆ ಪುನಃ ಪ್ರಶ್ನೆ ಮಾಡಬೇಕಾಗುತ್ತದೆ.

ಓಡಿತು:- ಹೀಗೆ ಒಂದೇ ಕ್ರಿಯಾಪದ ಹೇಳಿದಾಗ ಓಡಿದುದು ಯಾವುದು? ಎಂಬ ಪ್ರಶ್ನೆ ಬಂದೇ ಬರುತ್ತದೆ. ಪೂರ್ಣಾರ್ಥವು ಈ ಒಂದೇ ಪದದಿಂದ ಆಗದು. ಆದ್ದರಿಂದ ಅದನ್ನು ವಾಕ್ಯವೆನ್ನಲಾಗುವುದಿಲ್ಲ.

ದೇವರು ಲೋಕವನ್ನು:- ಹೀಗೆ ಕರ್ತೃ ಕರ್ಮ ಎರಡನ್ನೇ ಹೇಳಿದಾಗ, ದೇವರು ಲೋಕವನ್ನು ಏನು ಮಾಡಿದನು? ಎಂಬ ಪ್ರಶ್ನೆ ಏಳುವುದು. ಆಗ ಕ್ರಿಯಾಪದ ಬೇಕೇ ಬೇಕಾಗುವುದು.

ಭೀಮನಿಂದ ಕೊಲ್ಲಲ್ಪಟ್ಟನು:- ಎಂದಾಗ ಕೊಲ್ಲಲ್ಪಟ್ಟವನಾರು? ಎಂಬ ಕರ್ಮಪದದ ಬಗೆಗೆ ಪ್ರಶ್ನೆ ಎದ್ದೇ ಏಳುತ್ತದೆ. ಹಾಗಾದರೆ ವಾಕ್ಯವೆಂದರೆ, ಕರ್ತೃ, ಕರ್ಮ, ಕ್ರಿಯಾಪದಗಳಿಂದ ಕೂಡಿದ ಪದ ಸಮೂಹವೆಂದಹಾಗಾಯಿತು. ಆದರೆ ಕೆಲವು ವಾಕ್ಯಗಳಲ್ಲಿ ಕರ್ಮಪದದ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಕ್ರಿಯಾ ಪದವೇ ಕರ್ಮವನ್ನು ಅಪೇಕ್ಷಿಸುವುದಿಲ್ಲ. ‘ಮಗು
ಓಡಿತು’ ಎಂಬಲ್ಲಿ ಕರ್ಮಪದದ ಅರ್ಥವಿಲ್ಲ.

 • ಚಿಕ್ಕಮಗುವು ಹಾಡುತ್ತಾ ಕುಣಿಯುತ್ತಾ ಓಡಿತು.
 • ಮಹಾಶಕ್ತನಾದ ದೇವರು ಸಮಸ್ತ ಲೋಕಗಳನ್ನು ಪ್ರೀತಿಯಿಂದ ಕಾಪಾಡುವನು.
 • ಮಹಾಶೂರನಾದ ಭೀಮನಿಂದ ದುಷ್ಟನಾದ ಬಕನು ಪೂರ್ವಕಾಲದಲ್ಲಿ ಕೊಲ್ಲಲ್ಪಟ್ಟನು.

ಮೊದಲು ಹೇಳಿದ ಮೂರು ವಾಕ್ಯಗಳಲ್ಲಿ ಇನ್ನೂ ಕೆಲವು ಹೊಸಪದ ಸೇರಿಸಿ ವಾಕ್ಯ ಮಾಡಲಾಗಿದೆ. ಮೊದಲ ಸಲ- ‘ಮಗು ಓಡಿತು’ ಇಷ್ಟೇ ಹೇಳಿತ್ತು. ಈಗ ಚಿಕ್ಕ ಮಗುವು ಹಾಡುತ್ತ ಕುಣಿಯುತ್ತ ಓಡಿತು.
ಇಲ್ಲಿ-

 •  ಮಗುವು-ಚಿಕ್ಕಮಗು
 • ಓಡಿದುದು-ಹಾಡುತ್ತ, ಕುಣಿಯುತ

ಹಾಗಾದರೆ ಮಗು ಎಂಬ ಕರ್ತೃಪದಕ್ಕೆ ‘ಚಿಕ್ಕಮಗು’ ಎಂಬುದೂ, ‘ಓಡಿತು’ ಎಂಬುದಕ್ಕೆ ಹಾಡುತ್ತ, ಕುಣಿಯುತ್ತ, ಎಂಬುವೂ ವಿಶೇಷಣಗಳು.

ಕರ್ತೃಪದ, ಕರ್ಮಪದ, ಕ್ರಿಯಾಪದಗಳಿಂದ ಅವುಗಳ ವಿಶೇಷಣಗಳಿಂದ ಕ್ರಮವಾಗಿ ಬರೆದ ಪದಸಮೂಹವೇ ವಾಕ್ಯವೆನಿಸುವುದು.

ಅನೇಕ ವಾಕ್ಯಗಳನ್ನು ಪರಸ್ಪರ ಸಂಬಂಧವುಂಟಾಗುವಂತೆ ಜೋಡಿಸುವುದೇ
ವಾಕ್ಯರಚನೆ ಎನಿಸುವುದು.

 ಅನ್ವಯಾನುಕ್ರಮ

ವಾಕ್ಯದಲ್ಲಿ ಕರ್ತೃಪದ ಮೊದಲು, ಕರ್ಮಪದ ಆನಂತರ, ಕ್ರಿಯಾಪದ ಕೊನೆಯಲ್ಲಿ ಬರುತ್ತದೆ. ವಿಶೇಷಣಗಳು ಆಯಾಯ ಪದಗಳ ಹಿಂದೆ ಇರುತ್ತವೆ. ಇದು ಸಾಮಾನ್ಯ ನಿಯಮ.

ಉದಾಹರಣೆಗೆ:

“ಮಹಾಶೂರನಾದ ಶ್ರೀ ರಾಮಚಂದ್ರನು ದುಷ್ಟನಾದ ರಾವಣನನ್ನು ತೀಕ್ಷ್ಣವಾದ ಬಾಣಗಳಿಂದ ಕೊಂದನು”.
ಇಲ್ಲಿ-

ಶ್ರೀರಾಮಚಂದ್ರನು – ಕರ್ತೃ
ರಾವಣನನ್ನು –ಕರ್ಮ
ಕೊಂದನು – ಕ್ರಿಯಾಪದ

ಮೊದಲು ಕರ್ತೃಪದ; ಅದರ ಹಿಂದೆ ಆ ಕರ್ತೃಪದಕ್ಕೆ ವಿಶೇಷಣವಾದ ‘ಮಹಾಶೂರನಾದ’ ಎಂಬ ವಿಶೇಷಣ, ಅನಂತರ ಕರ್ಮಪದ, ಅದರ ಹಿಂದೆ ಅದರ ವಿಶೇಷಣವಾದ ‘ದುಷ್ಟನಾದ’ ಎಂಬ ವಿಶೇಷಣ. ಅನಂತರ ಕ್ರಿಯಾಪದ; ಅದರ ಹಿಂದೆ ಯಾವ ಸಾಧನದಿಂದ ಕೊಂದನೋ ಆ ಸಾಧನವೇ ಕ್ರಿಯಾವಿಶೇಷಣವಾಗಿ ಕ್ರಿಯಾಪದದ ಹಿಂದೆ ಬಂದಿದೆ. ಈ ಅನ್ವಯಾನುಕ್ರಮವೂ ವ್ಯತ್ಯಾಸವಾಗಿ ಹೀಗೆಯೂ ಆಗಬಹುದು-

“ದುಷ್ಟನಾದ ರಾವಣನನ್ನು, ತೀಕ್ಷ್ಣವಾದ ಬಾಣಗಳಿಂದ ಮಹಾಶೂರನಾದ,
ಶ್ರೀರಾಮಚಂದ್ರನು ಕೊಂದನು”.

ಇಲ್ಲಿ ಮೊದಲು ಕರ್ಮಪದ ಮತ್ತು ಅದರ ವಿಶೇಷಣ, ಅನಂತರ ಕ್ರಿ0iÉುಗೆ ಸಾಧನವಾದ ಬಾಣಗಳಿಂದ ಎಂಬಪದ; ಅನಂತರ ಮಹಾಶೂರನಾದ ರಾಮನು ಎಂಬ ಕರ್ತೃಪದ ಮತ್ತು ಅದರ ವಿಶೇಷಣ; ಕೊನೆಯಲ್ಲಿ ಕ್ರಿಯಾಪದ. ಹೀಗೆ ಅನನ್ವಯವಾಗಿಯೂ ಇರುವುದುಂಟು.

ಪದ್ಯಗಳಲ್ಲಿ ಈ ರೀತಿಯು ವಿಶೇಷವಾಗಿ ಬರುತ್ತದೆ. ಏಕೆಂದರೆ ಅವರು (ಪದ್ಯ ಬರೆಯುವವರು) ಪ್ರಾಸ, ಛಂದಸ್ಸು, ಗಣ-ಇತ್ಯಾದಿಗಳನ್ನು ಪಾಲಿಸುವುದಕ್ಕೋಸುಗ ಕರ್ತೃ,

ಕರ್ಮ, ಕ್ರಿಯಾಪದಗಳನ್ನು ಕ್ರಮವಾಗಿ ಬರೆದಿರುವುದಿಲ್ಲ. ನಾವು ಆ ಪದ್ಯಕ್ಕೆ ಅರ್ಥ ಹೇಳುವಾಗ ಅನ್ವಯಕ್ರಮದಲ್ಲಿ0iÉುೀ ಹೇಳಬೇಕಾಗುವುದು. ಅಂದರೆ ಮೊದಲು ಕರ್ತೃಪದವನ್ನು ಆ ಪದ್ಯದಲ್ಲಿ ಹುಡುಕಿ, ಅನಂತರ ಕರ್ಮಪದ ಹುಡುಕಿ, ಕೊನೆಗೆ ಕ್ರಿಯಾಪದದ ಅರ್ಥ ಹೇಳಬೇಕು.

ಹೀಗೆ ಪದ್ಯಕ್ಕೆ ಅರ್ಥ ಹೇಳುವುದನ್ನೇ ಅನ್ವಯಾನುಕ್ರಮದಲ್ಲಿ ಅರ್ಥ ವಿವರಣೆ ಮಾಡುವುದು ಎಂದು ಹೆಸರು.

ಉದಾಹರಣೆಗೆ-

“ಮಾಡಿಕೊಂಡನು ಪರಮ ಪುರುಷನಕೂಡ ತೋಟಿಯ ಸಿದ್ಧರಾಮನು”

ಇಲ್ಲಿ ಕ್ರಿಯಾಪದ ‘ಮಾಡಿಕೊಂಡನು’ ಎಂಬುದು. ಇದು ಮೊದಲೇ ಬಂದಿದೆ. ‘ಮಾಡಿಕೊಂಡನು’ ಎಂಬುದಕ್ಕೆ ‘ಯಾರು’ ಎಂದು ಪ್ರಶ್ನೆಮಾಡಿದರೆ ‘ಸಿದ್ಧರಾಮನು’ ಎಂಬ ಕರ್ತೃಪದ ಬರುವುದು. ‘ಏನನ್ನು ಮಾಡಿಕೊಂಡನು’ ಎಂದು ಪ್ರಶ್ನಿಸಿದಾಗ ‘ತೋಟಿಯನು ಎಂಬ ಕರ್ಮಪದ ಬರುವುದು. ಹಾಗಾದರೆ ವಾಕ್ಯದಲ್ಲಿ-

ಸಿದ್ಧರಾಮನು ತೋಟಿಯನ್ನು ಮಾಡಿಕೊಂಡನು’ ಹೀಗೆ ಕರ್ತೃ ಕರ್ಮ ಕ್ರಿಯಾಪದ ಗಳು ಕ್ರಮವಾಗಿ ಬರುವಂತೆ ಅರ್ಥ ಹೇಳುವುದೇ ಅನ್ವಯಾನುಕ್ರಮವೆನಿಸುವುದು. ಇವುಗಳಿಗೆ ವಿಶೇಷಣಗಳೇನಾದರೂ ಇವೆ0iÉುೀ ನೋಡಬೇಕು. ಕರ್ತೃವಿಗಾಗಲೀ ಕರ್ಮಕ್ಕಾಗಲಿ ಇಲ್ಲಿ ವಿಶೇಷಣಗಳು ಇಲ್ಲ.

‘ಮಾಡಿಕೊಂಡನು’ ಎಂಬ ಕ್ರಿಯಾಪದಕ್ಕೆ ‘ಪರಮಪುರುಷನಕೂಡ’ ಎಂಬ ಪದಸಮುಚ್ಚಯವು ವಿಶೇಷಣವಾಗಿದೆ. ಹೀಗೆ ಅನನ್ವಯವಾಗಿರುವ ವಾಕ್ಯಗಳನ್ನು ಅನ್ವಯಾನುಕ್ರಮದಲ್ಲಿ ಅರ್ಥ ಹೇಳಬೇಕಾದುದನ್ನು ಮುಖ್ಯವಾಗಿ ಗಮನಿಸಬೇಕಾಗುವುದು.

 ಆಧ್ಯಾಹಾರ:

ವಾಕ್ಯದಲ್ಲಿ ಬಿಟ್ಟುಹೋಗಿರುವ ಪದಗಳನ್ನು ವಾಕ್ಯಾರ್ಥದ ಪೂರ್ತಿಗಾಗಿ ಇರುವ ಪದಗಳ ಆಧಾರದಿಂದ ಊಹಿಸಿಕೊಂಡು ಸೇರಿಸುವುದೇ ‘ಆಧ್ಯಾಹಾರ’ ವೆನಿಸುವುದು.

ವಾಕ್ಯ ಅರ್ಥವತ್ತಾಗಿರಬೇಕಾದರೆ ಕರ್ತೃ ಕರ್ಮ ಕ್ರಿಯಾಪದಗಳಿರಬೇಕೆಂದೂ ಕೆಲವು ಕಡೆ ಕರ್ಮಪದವಿರುವುದಿಲ್ಲವೆಂದೂ ಈ ಹಿಂದೆ ತಿಳಿದಿದ್ದೀರಿ. ಆದರೆ ಕೆಲವು ಕಡೆ ಕ್ರಿಯಾಪದ ಮತ್ತು ಕರ್ತೃಪದಗಳಿಲ್ಲದೆ0iÉುೀ ವಾಕ್ಯಗಳಿರುವುದುಂಟು.

ಉದಾಹರಣೆಗೆ:

 X ಈಗ ಬಂದನು (ಇಲ್ಲಿ ಕರ್ತೃಪದವಿಲ್ಲ)

ಎಂಬಲ್ಲಿ ‘ಬಂದನು’ ಎಂಬ ಒಂದು ಕ್ರಿಯಾಪದ ಮಾತ್ರ ಇದೆ. ‘ಯಾರು?’ ಎಂದು ಪ್ರಶ್ನಿಸಿದಾಗ ಬಂದನು ಎಂಬುದು ಪುಲ್ಲಿಂಗವಾಗಿರುವುದರಿಂದ ‘ಅವನು’ – ‘ಆತನು’ ಎಂಬ ಯಾವುದಾದರೂ ಒಂದು ಪದವನ್ನು ‘ಆಧ್ಯಾಹಾರ’ ಮಾಡಬೇಕಾಗುವುದು.

 ಹುಡುಗನು ಬುದ್ಧಿವಂತ X

ಇಲ್ಲಿ ಕ್ರಿಯಾಪದವೇ ಇಲ್ಲ. ಹುಡುಗನು, ಬದ್ಧಿವಂತ, ಈ ಎರಡು ಪದಗಳ ಆಧಾರದ ಮೇಲೆ ಪುಲ್ಲಿಂಗವನ್ನು ಹೇಳುವ ಕ್ರಿಯಾಪದವಿರಬೇಕೆಂದು ಊಹಿಸಿ ‘ಆಗಿದ್ದಾನೆ, ಆಗುತ್ತಾನೆ, ಆದನು’-ಎಂಬ ಏಕವಚನಾಂತವಾದ ಕ್ರಿಯಾಪದವನ್ನು ಆಯಾ ಸಂದರ್ಭಕ್ಕೆ ಅನುಗುಣವಾಗಿ ‘ಆಧ್ಯಾಹಾರ’ ಮಾಡಬೇಕು.

 ಅವನು X ತಿಂದನು

ಇಲ್ಲಿ ಕರ್ತೃಪದವಿದೆ, ಕ್ರಿಯಾಪದವಿದೆ. ತಿಂದನು ಎಂಬ ಕ್ರಿಯಾಪದ ಸಕರ್ಮಕವಾದ್ದರಿಂದ ಕರ್ಮಪದ ಬೇಕೇಬೇಕು. ಆಗ ಈ ವಾಕ್ಯ ಬಂದ ಸಂದರ್ಭವನ್ನು ತಿಳಿದು ಅನ್ನವನ್ನು, ತಿಂಡಿಯನ್ನು, ಹಣ್ಣನ್ನು …… ಇತ್ಯಾದಿಯಾದ ಒಂದು ಪದವನ್ನು ಊಹಿಸಿ ಹೇಳಲೇಬೇಕಾಗುವುದು.

ಆದರೆ ಕರ್ಮಪದಗಳ ಆಧ್ಯಾಹಾರ ತೀರ ಕಡಿಮೆ. ಕರ್ತೃಪದ ಕ್ರಿಯಾಪದಗಳ ಆಧ್ಯಾಹಾರದ ಸಂದರ್ಭ ವಿಶೇಷವಾಗಿ ಬರುತ್ತದೆ. 

ವಾಕ್ಯದಲ್ಲಿ ಬಿಟ್ಟುಹೋಗಿರುವ ಪದಗಳನ್ನು ವಾಕ್ಯಾರ್ಥದ ಪೂರ್ತಿಗಾಗಿ ಇರುವ ಪದಗಳ ಆಧಾರದಿಂದ ಊಹಿಸಿಕೊಂಡು ಸೇರಿಸುವುದೇ ‘ಆಧ್ಯಾಹಾರ’ ವೆನಿಸುವುದು.

ಉದಾಹರಣೆಗೆ:

 ಕರ್ತೃಪದಗಳ ಆಧ್ಯಾಹಾರಕ್ಕೆ ಉದಾಹರಣೆ

 • X ಈಗ ಹೋದನು (ಅವನು)
 • X ನಾಳೆ ಬರುತ್ತೇನೆ (ನಾನು)
 • X ಮೊನ್ನೆ ಬಂದನು (ಅವನು)
 • X ಒಂದು ತಿಂಗಳ ನಂತರ ಹೋಗೋಣ (ನಾವು)

 ಕರ್ಮಪದಗಳ ಆಧ್ಯಾಹಾರಕ್ಕೆ ಉದಾಹರಣೆ-

ಈಗತಾನೆ X ಅವನು ತಿಂದನು (ಇಲ್ಲಿ ಹಣ್ಣನ್ನು, ತಿಂಡಿಯನ್ನು-ಇತ್ಯಾದಿ ಸಂದರ್ಭಕ್ಕೆ ಅನುಗುಣವಾಗಿ ಆಧ್ಯಾಹಾರ ಪದವನ್ನು ಊಹಿಸಬೇಕು)

ಕ್ರಿಯಾಪದಗಳ ಆಧ್ಯಾಹಾರಕ್ಕೆ ಉದಾಹರಣೆ-

 •  ಅವರ ಮನೆ ಎಲ್ಲಿ X ? (ಇದೆ)
 • ನಿನ್ನೆ ಕೊಟ್ಟ ಪುಸ್ತಕವೆಲ್ಲಿ X ? (ಇದೆ)
 • ನಾನು ಮಾಧ್ಯಮಿಕ ಶಾಲೆಯ ವಿದ್ಯಾರ್ಥಿ X (ಆಗಿದ್ದೇನೆ)
 • ಅದು ಬಹು ದೊಡ್ಡ ವಿಚಾರ X (ಆಗಿದೆ)
 • ಎಲ್ಲವೂ ತನಗೇ X ಎಂದನು (ಬೇಕು)
 •  ನನಗೆ ಐವರು ಪುತ್ರರು X (ಇರುವರು)
 • ಈತನೇ ಹಿರಿಯಮಗ X (ಆಗಿದ್ದಾನೆ)
 • ಅಲ್ಲಿ ಆಡುವವಳೇ ನನ್ನ ಮಗಳು X (ಆಗಿದ್ದಾಳೆ)

ಹೀಗೆ ವಾಕ್ಯಗಳಲ್ಲಿ ಬಿಟ್ಟು ಹೋಗಿರುವ ಪದಗಳನ್ನು ಅಲ್ಲಿರುವ ಇತರ ಪದಗಳ ಸಹಾಯದಿಂದ ಊಹಿಸಿ ಹೇಳುವುದೇ ಆಧ್ಯಾಹಾರವೆಂದ ಹಾಗಾಯಿತು.

 ವಾಕ್ಯಗಳ ಪ್ರಕಾರಗಳು

 1. ಸಾಮಾನ್ಯ ವಾಕ್ಯ
 2. ಸಂಯೋಜಿತ ವಾಕ್ಯ
 3. ಮಿಶ್ರವಾಕ್ಯಗಳು

ಇದುವರೆಗೆ ವಾಕ್ಯವೆಂದರೇನು? ವಾಕ್ಯದಲ್ಲಿ ಅನ್ವಯಾನುಕ್ರಮ, ಆಧ್ಯಾಹಾರಗಳೆಂದರೇನು? ಎಂಬ ಬಗೆಗೆ ಸ್ಥೂಲವಾಗಿ ಕೆಲವು ವಿಷಯ ತಿಳಿದಿರುವಿರಿ. ಈಗ ವಾಕ್ಯಗಳಲ್ಲಿ ಮೂರು ರೀತಿಯ ಪ್ರಧಾನವಾದ ಭೇದಗಳನ್ನು ಮಾತ್ರ ತಿಳಿದರೆ ಸಾಕು.

ಸಾಮಾನ್ಯ ವಾಕ್ಯ:

ಒಂದು ಪೂರ್ಣಕ್ರಿಯಾಪದದೊಡನೆ ಸ್ವತಂತ್ರವಾಗಿರುವ ವಾಕ್ಯಗಳೇ ಸಾಮಾನ್ಯ ವಾಕ್ಯಗಳೆನಿಸುವುವು.

ಈ ಕೆಳಗಿನ ವಾಕ್ಯಗಳನ್ನು ನೋಡಿರಿ.

 • ಖಾನದೇಶವು ಮಲೇರಿಯಾದ ತವರೂರಾಗಿತ್ತು.
 • ಖಾನದೇಶದಲ್ಲಿ ವಿಶ್ವೇಶ್ವರಯ್ಯನವರು ಮಲೇರಿಯಾ ಬೇನೆಯಿಂದ ಬಳಲಿದರು.
 • ವಿಶ್ವೇಶ್ವರಯ್ಯನವರು ದೇಹಾರೋಗ್ಯವನ್ನು ಕಾಪಾಡಿಕೊಳ್ಳಲು ವರ್ಗಕ್ಕೆ ಅರ್ಜಿ ಹಾಕಿದರು.
 • ವಿಶ್ವೇಶ್ವರಯ್ಯನವರನ್ನು ರಸ್ತೆ ಮತ್ತು ಕಟ್ಟಡಗಳ ಮೇಲ್ವಿಚಾರಣೆಯ ವಿಭಾಗಕ್ಕೆ ವರ್ಗ ಮಾಡಿದರು.

ಈ ನಾಲ್ಕೂ ವಾಕ್ಯಗಳೂ ಒಂದೊಂದು ಪೂರ್ಣಕ್ರಿಯಾಪದದೊಡನೆ ಸ್ವತಂತ್ರ ವಾಕ್ಯಗಳಾಗಿವೆ.

 ಒಂದು ಪೂರ್ಣಕ್ರಿಯಾಪದದೊಡನೆ ಸ್ವತಂತ್ರವಾಗಿರುವ ವಾಕ್ಯಗಳೇ ಸಾಮಾನ್ಯ ವಾಕ್ಯಗಳೆನಿಸುವುವು.

ಸಾಮಾನ್ಯ ವಾಕ್ಯದಲ್ಲಿ ಕ್ರಿಯಾಪದವು ಒಂದು ಮಾತ್ರ ಇರಬೇಕು. ಸಾಪೇಕ್ಷ ಕ್ರಿಯಾರೂಪಗಳು ಮಧ್ಯದಲ್ಲಿ ಬರಬಹುದು. ಈ ಕೆಳಗೆ ಸಾಪೇಕ್ಷ ಕ್ರಿಯಾರೂಪಗಳಿಂದ ಕೂಡಿ, ಒಂದೇ ಕ್ರಿಯಾಪದದಿಂದ ಪೂರ್ಣಗೊಂಡ ಸಾಮಾನ್ಯ ವಾಕ್ಯ ನೋಡಿರಿ.

“ಖಾನದೇಶವು ಮಲೇರಿಯಾದಿಂದ ಕೂಡಿ, ವಿಶ್ವೇಶ್ವರಯ್ಯನವರ ಆರೋಗ್ಯದ ಮೇಲೆ ದುಷ್ಪರಿಣಾಮ ಮಾಡಿ, ಅವರು ಅಲ್ಲಿಂದ ವರ್ಗವಾಗುವಂತೆ ಮಾಡಿತು”.

ಇಲ್ಲಿ ‘ಮಾಡಿತು’ ಎಂಬ ಒಂದೇ ಕ್ರಿಯಾಪದವಿದ್ದು ‘ಕೂಡಿ, ಮಾಡಿ’ ಎಂಬ ಸಾಪೇಕ್ಷ ಕ್ರಿ0iÉುಗಳು ಮಧ್ಯದಲ್ಲಿ ಬಂದಿವೆ.

ಸಂಯೋಜಿತ ವಾಕ್ಯ:

ಸ್ವತಂತ್ರ ವಾಕ್ಯಗಳಾಗಿ ನಿಲ್ಲಬಲ್ಲ ಅನೇಕ ಉಪವಾಕ್ಯಗಳೊಡನೆ ಒಂದು ಪೂರ್ಣಾಭಿಪ್ರಾಯದ ವಾಕ್ಯವಾಗಿದ್ದರೆ, ಅದು ಸಂಯೋಜಿತ ವಾಕ್ಯವೆನಿಸಿಕೊಳ್ಳುವುದು.

“ಖಾನದೇಶವು ಮಲೇರಿಯಾದ ತವರೂರೆನಿಸಿತ್ತು; ಆದ್ದರಿಂದ ವಿಶ್ವೇಶ್ವರಯ್ಯನವರೂ ಅಲ್ಲಿ ಮಲೇರಿಯಾದಿಂದ ಬಳಲಬೇಕಾಯಿತು; ಈ ಕಾರಣದಿಂದಲೇ ಅವರು ಅಲ್ಲಿಂದ ವರ್ಗ ಮಾಡಿಸಿಕೊಂಡರು”.

ಮೇಲಿನ ಈ ವಾಕ್ಯ ಸಮೂಹದಲ್ಲಿ ಬೇರೆ ಬೇರೆ ಮೂರು ವಾಕ್ಯಗಳಿವೆ. ಆದರೆ ಆ ವಾಕ್ಯಗಳು ಒಂದಕ್ಕೊಂದು ಸಂಯೋಜನೆಗೊಂಡು ಒಂದು ಪೂರ್ಣಾರ್ಥದ ವಾಕ್ಯವಾಗಿದೆ.

ಹೀಗೆ-
ಸ್ವತಂತ್ರ ವಾಕ್ಯಗಳಾಗಿ ನಿಲ್ಲಬಲ್ಲ ಅನೇಕ ಉಪವಾಕ್ಯಗಳೊಡನೆ ಒಂದು ಪೂರ್ಣಾಭಿಪ್ರಾಯದ ವಾಕ್ಯವಾಗಿದ್ದರೆ, ಅದು ಸಂಯೋಜಿತ ವಾಕ್ಯವೆನಿಸಿಕೊಳ್ಳುವುದು.

ಉದಾಹರಣೆಗೆ:

ಶ್ರೀರಾಮನ ಅಶ್ವಮೇಧಯಾಗದ ಕುದುರೆಯು ವಾಲ್ಮೀಕಿಗಳ ಪುಣ್ಯಾಶ್ರಮದ ಉಪವನವನ್ನು ಹೊಕ್ಕಿತು; ಆಗ ಆ ತೋಟದ ಕಾವಲು ಮಾಡುತ್ತಿದ್ದ ಲವನು ಅದನ್ನು ಕಟ್ಟಿಹಾಕಿದನು; ಆದ್ದರಿಂದ ಲವನನ್ನು ಕುದುರೆಯ ಕಾವಲಿನ ಭಟರು ಹಿಡಿದುಕೊಂಡು ಹೋದರು.

ಇಲ್ಲಿ-

 • ಶ್ರೀರಾಮನ ಅಶ್ವಮೇಧಯಾಗದ ಕುದುರೆಯು ವಾಲ್ಮೀಕಿಗಳ ಪುಣ್ಯಾಶ್ರಮದ ಉಪವನ ವನ್ನು ಹೊಕ್ಕಿತು.
 • ಆಗ ಆ ತೋಟದ ಕಾವಲು ಮಾಡುತ್ತಿದ್ದ ಲವನು ಅದನ್ನು ಕಟ್ಟಿಹಾಕಿದನು.
 • ಆದ್ದರಿಂದ ಲವನನ್ನು ಕುದುರೆಯ ಕಾವಲಿನ ಭಟರು ಹಿಡಿದುಕೊಂಡು ಹೋದರು.

ಈ ಮೂರು ಸ್ವತಂತ್ರ ಕ್ರಿಯಾಪದವುಳ್ಳ ವಾಕ್ಯಗಳು ಒಂದಕ್ಕೊಂದು ‘ಆಗ’ ‘ಆದ್ದರಿಂದ’ -ಎಂಬ ಶಬ್ದಗಳ ಸಂಬಂಧದಿಂದ ಒಂದು ಅಭಿಪ್ರಾಯವನ್ನು ಪೂರ್ಣ ಹೇಳುವ ಸಂಯೋಜಿತ ವಾಕ್ಯವೆನಿಸಿದೆ.

ಮಿಶ್ರವಾಕ್ಯ:

 ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನವಾಕ್ಯಕ್ಕೆ ಅಧೀನಗಳಾಗಿದ್ದರೆ ಅಂಥ ವಾಕ್ಯವನ್ನು ಮಿಶ್ರವಾಕ್ಯವೆನ್ನುತ್ತೇವೆ.

ನಮ್ಮ ಪರೀಕ್ಷೆ ಮುಗಿಯಿತೆಂದು, ತಂದೆಗೆ ಮಗನು ತಿಳಿಸಿದನು.

ಇಲ್ಲಿ ಪ್ರಧಾನ ಕ್ರಿಯಾಪದ ‘ತಿಳಿಸಿದನು’ ಎಂಬುದು, ‘ನಮ್ಮ ಪರೀಕ್ಷೆ ಮುಗಿಯಿತು ಎಂದು’ ಎಂಬ ಈ ಉಪವಾಕ್ಯವೇ ‘ತಿಳಿಸಿದನು’ ಎಂಬ ಕ್ರಿಯಾಪದದ ಕರ್ಮವಾಯಿತು.

ಶಂಕರನಿಗೆ ವಿದ್ಯಾರ್ಥಿವೇತನ ಸಿಕ್ಕಿತೆಂಬುದನ್ನು ಅವನಿಂದಲೇ ಕೇಳಿದೆನು.

ಇಲ್ಲಿ ‘ಕೇಳಿದೆನು’ ಎಂಬ ಕ್ರಿಯಾಪದವು ಪ್ರಧಾನ ಕ್ರಿಯಾಪದ. ಈ ಕ್ರಿಯಾಪದಕ್ಕೆ ಮೊದಲನೆಯ ವಾಕ್ಯವಾದ ‘ಶಂಕರನಿಗೆ ವಿದ್ಯಾರ್ಥಿವೇತನ ಸಿಕ್ಕಿತು ಎಂಬುದನ್ನು’ ಎಂಬುದು ಕರ್ಮವಾಗಿ ಅಧೀನ ವಾಕ್ಯವೆನಿಸಿದೆ. ‘ಕೇಳಿದೆನು’ ಎಂಬ ಕ್ರಿಯಾಪದದ ಕರ್ತೃವು ಇಲ್ಲಿ ಹೇಳಲ್ಪಟ್ಟಿಲ್ಲ.

‘ನಾನು’ ಎಂದು ಆಧ್ಯಾಹಾರ ಮಾಡಿಕೊಳ್ಳಬೇಕಾಗುತ್ತದೆ. ಇಂಥ- 

 ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನವಾಕ್ಯಕ್ಕೆ ಅಧೀನಗಳಾಗಿದ್ದರೆ ಅಂಥ ವಾಕ್ಯವನ್ನು ಮಿಶ್ರವಾಕ್ಯವೆನ್ನುತ್ತೇವೆ.

ಉದಾಹರಣೆಗೆ:

ಏನಾದರೂ ಮಾಡಿ ಭಾರತದಲ್ಲಿ ಮೋಟಾರು ಕಾರ್ಖಾನೆಯನ್ನು ಸ್ಥಾಪಿಸಲು ವಿಶ್ವೇಶ್ವರಯ್ಯನವರು ನಿರ್ಧರಿಸಿದರಾದರೂ, ಅವರ ನಿರ್ಧಾರಕ್ಕೆ ಬ್ರಿಟೀಷ್ ಸರಕಾರದ ಅಪ್ಪಣೆ ದೊರೆಯಲಿಲ್ಲವೆಂಬ ವಿಷಯ ತಿಳಿದಾಗ ಬಹುವಾಗಿ ಮರುಗಿದರು.

ಇಲ್ಲಿ ‘ಬಹುವಾಗಿ ಮರುಗಿದರು’ ಎಂಬ ಪ್ರಧಾನ ವಾಕ್ಯಕ್ಕೆ – ಏನಾದರೂ ಮಾಡಿ ಭಾರತದಲ್ಲಿ ಮೋಟಾರು ಕಾರ್ಖಾನೆಯನ್ನು ಸ್ಥಾಪಿಸಲು ವಿಶ್ವೇಶ್ವರಯ್ಯನವರು ನಿರ್ಧರಿಸಿದರು.  ಅವರ ನಿರ್ಧಾರಕ್ಕೆ ಬ್ರಿಟೀಷ್ ಸರಕಾರದ ಅಪ್ಪಣೆ ದೊರೆಯಲಿಲ್ಲ. ಎಂಬ ವಾಕ್ಯಗಳು ಉಪವಾಕ್ಯಗಳೆನಿಸಿ ಇದು ಮಿಶ್ರವಾಕ್ಯವೆನಿಸಿದೆ.

ವಾಕ್ಯವಿಭಜನೆ:

ಇದುವರೆಗೆ-ಸಾಮಾನ್ಯ ವಾಕ್ಯ, ಸಂಯೋಜಿತವಾಕ್ಯ, ಮಿಶ್ರವಾಕ್ಯಗಳ ಸಾಮಾನ್ಯ ಪರಿಚಯ ಮಾಡಿಕೊಂಡಿರಿ. ಒಂದೊಂದು ವಾಕ್ಯದಲ್ಲೂ ಕರ್ತೃ, ಕರ್ಮ (ಸಕರ್ಮಕ ಧಾತುವಾಗಿದ್ದರೆ ಮಾತ್ರ), ಕ್ರಿಯಾಪದಗಳು ಮುಖ್ಯವಾಗಿರಬೇಕು.

ಒಮ್ಮೊಮ್ಮೆ ವಾಕ್ಯದಲ್ಲಿ ಈ ಪದಗಳಲ್ಲಿ ಯಾವುದಾದರೂ ಒಂದು ಪದವಿರದಿದ್ದರೆ, ಸಂದರ್ಭ ಮತ್ತು ಇರುವ ಪದಗಳ ಅರ್ಥದ
ಸಹಾಯದಿಂದ ಇರಬೇಕಾದ ಪದದ ಆಧ್ಯಾಹಾರ ಮಾಡಿಕೊಳ್ಳಬೇಕಾಗುತ್ತದೆ. ಹೀಗಿರುವ ಕರ್ತೃ, ಕರ್ಮ, ಕ್ರಿ0iÉುಗಳಿಂದ ಕೂಡಿದ ವಾಕ್ಯದಲ್ಲಿ ಕರ್ತೃವಿಗೂ ಕರ್ಮಕ್ಕೂ, ಕ್ರಿಯಾಪದಕ್ಕೂ ವಿಶೇಷಣ ಪದಗಳೂ ಇರುತ್ತವೆ.

ಉದಾಹರಣೆಗೆ-

ದೊಡ್ಡ ದೊಡ್ಡ ಮಕ್ಕಳು ತಂದೆ ತಾಯಿಗಳ ಕಾರ್ಯದಲ್ಲಿ ತಮ್ಮ ಕೈಲಾದ ಸಹಾಯವನ್ನು ಅವಶ್ಯವಾಗಿ ಮಾಡಲೇಬೇಕು.

ಈ ವಾಕ್ಯದಲ್ಲಿ ‘ಮಾಡಲೇಬೇಕು’-ಎಂಬುದೇ ಕ್ರಿಯಾಪದ. ‘ಮಕ್ಕಳು’-ಕರ್ತೃ, ‘ಸಹಾಯವನ್ನು’-ಕರ್ಮ. ಅಂದರೆ ‘ಮಕ್ಕಳು ಸಹಾಯವನ್ನು ಮಾಡಲೇಬೇಕು’ ಎಂಬ ಈ ಮೂರು ಪದಗಳು ಕ್ರಮವಾಗಿ ಕರ್ತೃ, ಕರ್ಮ, ಕ್ರಿ0iÉುಗಳಾದರೆ-ಇವುಗಳಿಗೆ ಒಂದೊಂದಕ್ಕೂ ವಿಶೇಷಣ ಪದಗಳಿವೆ.

 • ಮಕ್ಕಳು-ಎಂಬುದಕ್ಕೆ ‘ದೊಡ್ಡ ದೊಡ್ಡ’ ಎಂಬಿವು ವಿಶೇಷಣಗಳು.
 • ಸಹಾಯವನ್ನು-ಎಂಬುದಕ್ಕೆ ತಂದೆ ತಾಯಿಗಳ ಕಾರ್ಯದಲ್ಲಿ ಎಂಬ ಪದಗಳೂ,
 • ಮಾಡಲೇಬೇಕು-ಎಂಬ ಕ್ರಿಯಾಪದಕ್ಕೆ ‘ಅವಶ್ಯವಾಗಿ’ ಎಂಬುದೂ ವಿಶೇಷಣಗಳು.

ಹೀಗೆ ಕರ್ತೃ, ಕರ್ಮ, ಕ್ರಿಯಾಪದ ಇತ್ಯಾದಿ ಪ್ರಧಾನ ಪದಗಳಿಗೆ ಇರುವ ಕರ್ತೃ ವಿಶೇಷಣಗಳು, ಕರ್ಮವಿಶೇಷಣಗಳು, ಕ್ರಿಯಾವಿಶೇಷಣಗಳೇ ಮೊದಲಾದುವನ್ನು ಅವುಗಳ ಸಂಬಂಧವನ್ನು ಬೇರ್ಪಡಿಸಿ ಹೇಳುವ ವಿಧಾನವೇ ವಾಕ್ಯವಿಭಜನೆ0iÉುನಿಸುವುದು. ಈ ಕ್ರಮದಿಂದ ನಮಗೆ ವಾಕ್ಯ ರಚನೆ ಸ್ಪಷ್ಟವಾಗುವುದು.

ರೂಪನಿಷ್ಪತ್ತಿ

 ಭಾಷೆಯಲ್ಲಿ ನಾವು ಮಾತನಾಡುವ ಮತ್ತು ಬರೆಯುವ, ಕಾವ್ಯಗಳಲ್ಲಿ ಬರುವ ಶಬ್ದಗಳು ವ್ಯಾಕರಣದ ಯಾವ ನಿಯಮಕ್ಕನುಗುಣವಾಗಿ ಸಿದ್ಧವಾಗಿವೆ? ಅವುಗಳ ಕಾರ್ಯ ಮತ್ತು ಪ್ರಯೋಜನಗಳೇನು? ಸಂಬಂಧವೇನು? ಎಂಬುದನ್ನು ತಿಳಿಸುವುದೇ ರೂಪನಿಷ್ಪತ್ತಿ0iÉುನಿಸುವುದು.

ಉದಾಹರಣೆಗೆ ಈ ವಾಕ್ಯವನ್ನು ನೋಡಿರಿ.

 •  ರಾಜನು ರಾಜ್ಯವನ್ನು ಆಳುತ್ತಾನೆ.
  • ಈ ವಾಕ್ಯದಲ್ಲಿ ಮೂರು ಪದಗಳಿವೆ. ರಾಜನು ಎಂಬುದು ಕರ್ತೃಪದ, ರಾಜ್ಯವನ್ನು ಕರ್ಮಪದ, ಆಳುತ್ತಾನೆ ಎಂಬುದು ಕ್ರಿಯಾಪದ. ಒಂದೊಂದು ಪದವೂ ಹೇಗೆ ರೂಪ ಸಿದ್ಧಿಯನ್ನು ವ್ಯಾಕರಣ ದೃಷ್ಟಿಯಿಂದ ಪಡೆದಿದೆ, ಎಂಬುದನ್ನು ನೋಡಿರಿ.
  • ರಾಜನು -‘ರಾಜ’ ಎಂಬ ಅಕಾರಾಂತ ಪುಲ್ಲಿಂಗ ಪ್ರಕೃತಿಯ ಮೇಲೆ ‘ಉ’ ಎಂಬ ಪ್ರಥಮಾವಿಭಕ್ತಿಪ್ರತ್ಯಯ ಬಂದು, ನಡುವೆ ನಕಾರಾಗಮವಾಗಿ ‘ರಾಜನು’ ಎಂಬ ರೂಪವೊಂದಿ, ‘ಆಳುತ್ತಾನೆ’ ಎಂಬ ಕ್ರಿ0iÉುಗೆ ಕರ್ತೃವಾಯಿತು.
  • ರಾಜ್ಯವನ್ನು-‘ರಾಜ್ಯ’ ಎಂಬ ಅಕಾರಾಂತ ನಪುಂಸಕಲಿಂಗ ಪ್ರಕೃತಿಯು ದ್ವಿತೀಯಾವಿಭಕ್ತಿ ಏಕವಚನವನ್ನು ಹೊಂದಿ ‘ರಾಜ್ಯವನ್ನು’ ಎಂಬ ಪದವಾಗಿ ‘ಆಳುತ್ತಾನೆ’ ಎಂಬ ಕ್ರಿ0iÉುಗೆ ಕರ್ಮವಾಯಿತು (ಕರ್ಮಪದವಾಯಿತು).
  • ಆಳುತ್ತಾನೆ-‘ಆಳು’ ಎಂಬ ಉಕಾರಾಂತ ಧಾತುವಿಗೆ ವರ್ತಮಾನಕಾಲದ ಪ್ರಥಮ ಪುರುಷ ಪುಲ್ಲಿಂಗ ಏಕವಚನದ ಆಖ್ಯಾತಪ್ರತ್ಯಯ ಬಂದು ‘ಆಳುತ್ತಾನೆ’ ಎಂಬ ಕ್ರಿಯಾಪದ ರೂಪಸಿದ್ಧಿ ಪಡೆಯಿತು. ಹೀಗೆ ವಾಕ್ಯದಲ್ಲಿರುವ ಪ್ರತಿ ಶಬ್ದದ ರೂಪಸಿದ್ಧಿಯು ವ್ಯಾಕರಣ ನಿಯಮದಂತೆ ಹೇಗಾಯಿತೆಂದು ಹೇಳುವುದೇ ರೂಪನಿಷ್ಪತ್ತಿ0iÉುನಿಸುವುದು.

ಕೆಳಗಿನ ವಾಕ್ಯದಲ್ಲಿ ಬಂದಿರುವ ಶಬ್ದಗಳ ರೂಪನಿಷ್ಪತ್ತಿಯನ್ನು ಗಮನಿಸಿರಿ.

 ವಿಶ್ವೇಶ್ವರಯ್ಯನವರು ಉದ್ಯೋಗವನ್ನು ಹುಡುಕಿಕೊಂಡು ಹೋಗಲಿಲ್ಲ; ಉದ್ಯೋಗವೇ ಅವರನ್ನು ಹುಡುಕಿಕೊಂಡು ಬಂದಿತು.

ವಿಶ್ವೇಶ್ವರಯ್ಯನವರು-‘ವಿಶ್ವೇಶ್ವರಯ್ಯ’ ಎಂಬ ಅಕಾರಾಂತಪುಲ್ಲಿಂಗನಾಮಪ್ರಕೃತಿಗೆ ಗೌರವಾರ್ಥದಲ್ಲಿ ಪ್ರಥಮಾ ಬಹುವಚನ. ‘ಹೋಗಲಿಲ್ಲ ಎಂಬ ಕ್ರಿ0iÉುಗೆ ಕರ್ತೃಪದ.

ಉದ್ಯೋಗವನ್ನು-‘ಉದ್ಯೋಗ’ ಎಂಬ ಅಕಾರಾಂತ ನಪುಂಸಕಲಿಂಗ ನಾಮಪ್ರಕೃತಿ. ಅನ್ನು’ ಎಂಬ ದ್ವಿತೀಯಾವಿಭಕ್ತಿ ಏಕವಚನ. ‘ಹೋಗಲಿಲ್ಲ’ ಎಂಬ ಕ್ರಿಯಾಪದಕ್ಕೆ ಕರ್ಮಪದ.

ಹುಡುಕಿಕೊಂಡು-‘ಹುಡುಕಿಕೊಳ್ಳು’ ಎಂಬ ಸಂಯುಕ್ತ ಧಾತುವಿನ ಭೂತ ನ್ಯೂನ. ‘ಹುಡುಕಿಕೊಳ್ಳು’ ಧಾತುವಿನ ಮೇಲೆ ‘ದು’ ಪ್ರತ್ಯಯ ಬಂದು ‘ಹುಡುಕಿಕೊಂಡು’ ಎಂಬ ಕೃದಂತಾವ್ಯಯವಾಗಿದೆ. ಇದು ‘ಹೋಗಲಿಲ್ಲ’ ಎಂಬ ಕ್ರಿ0iÉುಗೆ ವಿಶೇಷಣವಾಗಿ ಬಂದಿದೆ.

 ಹೋಗಲಿಲ್ಲ-‘ಹೋಗಲು’ ‘ಇಲ್ಲ’, ಎಂಬ ಎರಡು ಪದಗಳಿವೆ. ‘ಹೋಗಲು’ ಎಂಬುದು ‘ಹೋಗು’ ಧಾತುವಿನ ಮೇಲೆ ‘ಅಲು’ ಎಂಬ ಪ್ರತ್ಯಯ ಬಂದು ‘ಹೋಗಲು’ ಎಂಬ ಕೃದಂತಾವ್ಯಯವಾಗಿದೆ. ‘ಇಲ್ಲ’ ಎಂಬುದು ನಿಷೇಧಾರ್ಥಕ ಕ್ರಿಯಾರ್ಥಕಾವ್ಯಯ.

ಉದ್ಯೋಗವು-‘ಉದ್ಯೋಗ’ ಎಂಬ ಅಕಾರಾಂತ ನಪುಂಸಕಲಿಂಗ ನಾಮ ಪ್ರಕೃತಿ. ಪ್ರಥಮಾವಿಭಕ್ತಿ ಏಕವಚನ, ‘ಬಂದಿತು’ ಎಂಬ ಕ್ರಿ0iÉುಗೆ ಕರ್ತೃಪದ. ‘ಏ’ ಅವಧಾರಣಾರ್ಥಕ ಅವ್ಯಯ.

ಅವರನ್ನು-‘ಅವನು’ ಉಕಾರಾಂತ ಪುಲ್ಲಿಂಗ. ಪುರುಷಾರ್ಥಕ ಸರ್ವನಾಮ (ಪ್ರಥಮಪುರುಷಪುಲ್ಲಿಂಗ) ದ ಮೇಲೆ ಗೌರವಾರ್ಥದಲ್ಲಿ ದ್ವಿತೀಯಾ ಬಹುವಚನದ ನಾಮವಿಭಕ್ತಿಪ್ರತ್ಯಯ ಬಂದು ‘ಅವರನ್ನು’ ಎಂಬ ರೂಪವಾಗಿದೆ.

 ಹುಡುಕಿಕೊಂಡು-‘ಹುಡುಕಿಕೊಳ್ಳು’ ಎಂಬ ಸಂಯುಕ್ತ ಧಾತುವಿನ ಭೂತ ನ್ಯೂನ. ‘ಹುಡುಕಿಕೊಳ್ಳು’ ಧಾತುವಿನ ಮೇಲೆ ‘ದು’ ಪ್ರತ್ಯಯ ಬಂದು, ‘ಹುಡುಕಿಕೊಂಡು’ ಎಂಬ ಕೃದಂತಾವ್ಯಯವಾಗಿದೆ. ಇದು ‘ಅವರನ್ನು’ ಎಂಬ ಪದದೊಡನೆ ‘ಬಂದಿತು’ ಎಂಬ ಕ್ರಿ0iÉುಗೆ ವಿಶೇಷಣವಾಗಿದೆ.

 ಬಂದಿತು-‘ಬರು’ ಧಾತು, ಭೂತಕಾಲ, ಪ್ರಥಮ ಪುರುಷ, ನಪುಂಸಕಲಿಂಗ, ಏಕವಚನ ಕ್ರಿಯಾಪದ.

ಈ ರೀತಿ ಮೇಲೆ ಹೇಳಿದ ಹಾಗೆ ವಾಕ್ಯಗಳಲ್ಲಿ ಬರುವ ಪ್ರತಿ ಪದಕ್ಕೂ ರೂಪನಿಷ್ಪತ್ತಿಯನ್ನು ಹೇಳಬೇಕು.

Conclusion:

ಕನ್ನಡ ವಾಕ್ಯಗಳು  ( Kannada vakyagalu) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್‌ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.

FAQ:

1.ವಾಕ್ಯಗಳು ಎಂದರೇನು?

ಕರ್ತೃಪದ, ಕರ್ಮಪದ, ಕ್ರಿಯಾಪದಗಳಿಂದ ಅವುಗಳ ವಿಶೇಷಣಗಳಿಂದ ಕ್ರಮವಾಗಿ ಬರೆದ ಪದಸಮೂಹವೇ ವಾಕ್ಯವೆನಿಸುವುದು.

2.ವಾಕ್ಯರಚನೆ ಎಂದರೇನು?

ಅನೇಕ ವಾಕ್ಯಗಳನ್ನು ಪರಸ್ಪರ ಸಂಬಂಧವುಂಟಾಗುವಂತೆ ಜೋಡಿಸುವುದೇ
ವಾಕ್ಯರಚನೆ ಎನಿಸುವುದು.

3.ವಾಕ್ಯದ ವಿಧಗಳು

ಸಾಮಾನ್ಯ ವಾಕ್ಯ
ಸಂಯೋಜಿತ ವಾಕ್ಯ
ಮಿಶ್ರವಾಕ್ಯಗಳು

4.ಅನ್ವಯಾನುಕ್ರಮ ಎಂದರೇನು?

ಕರ್ಮ, ಕ್ರಿಯಾಪದಗಳನ್ನು ಕ್ರಮವಾಗಿ ಬರೆದಿರುವುದಿಲ್ಲ. ನಾವು ಆ ಪದ್ಯಕ್ಕೆ ಅರ್ಥ ಹೇಳುವಾಗ ಅನ್ವಯಕ್ರಮದಲ್ಲಿ0iÉುೀ ಹೇಳಬೇಕಾಗುವುದು.

5.ಆಧ್ಯಾಹಾರ ಎಂದರೇನು?

ವಾಕ್ಯದಲ್ಲಿ ಬಿಟ್ಟುಹೋಗಿರುವ ಪದಗಳನ್ನು ವಾಕ್ಯಾರ್ಥದ ಪೂರ್ತಿಗಾಗಿ ಇರುವ ಪದಗಳ ಆಧಾರದಿಂದ ಊಹಿಸಿಕೊಂಡು ಸೇರಿಸುವುದೇ ‘ಆಧ್ಯಾಹಾರ’ ವೆನಿಸುವುದು.

6. ಸಾಮಾನ್ಯ ವಾಕ್ಯ ಎಂದರೇನು?

ಒಂದು ಪೂರ್ಣಕ್ರಿಯಾಪದದೊಡನೆ ಸ್ವತಂತ್ರವಾಗಿರುವ ವಾಕ್ಯಗಳೇ ಸಾಮಾನ್ಯ ವಾಕ್ಯಗಳೆನಿಸುವುವು.

7. ಸಂಯೋಜಿತ ವಾಕ್ಯ ಎಂದರೇನು?

ಸ್ವತಂತ್ರ ವಾಕ್ಯಗಳಾಗಿ ನಿಲ್ಲಬಲ್ಲ ಅನೇಕ ಉಪವಾಕ್ಯಗಳೊಡನೆ ಒಂದು ಪೂರ್ಣಾಭಿಪ್ರಾಯದ ವಾಕ್ಯವಾಗಿದ್ದರೆ, ಅದು ಸಂಯೋಜಿತ ವಾಕ್ಯವೆನಿಸಿಕೊಳ್ಳುವುದು.

8. ಮಿಶ್ರವಾಕ್ಯಗಳು ಎಂದರೇನು?

ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನವಾಕ್ಯಕ್ಕೆ ಅಧೀನಗಳಾಗಿದ್ದರೆ ಅಂಥ ವಾಕ್ಯವನ್ನು ಮಿಶ್ರವಾಕ್ಯವೆನ್ನುತ್ತೇವೆ.

Similar Posts

0 0 votes
Article Rating
Subscribe
Notify of
guest

0 Comments
Inline Feedbacks
View all comments