ಕನ್ನಡ ವಚನಗಳು – Kannada Vachanagalu
Check out Kannada Vachanagalu in kannada , ಕನ್ನಡ ವಚನಗಳು ( Kannada Vachanagalu).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ವಚನಗಳು ( Kannada Vachanagalu) ತಿಳಿದುಕೊಳ್ಳೋಣ.
ಕನ್ನಡ ವಚನಗಳು:
ಕನ್ನಡ ಭಾಷೆಯಲ್ಲಿ ವಸ್ತು, ಪ್ರಾಣಿ, ಅಥವಾ ವ್ಯಕ್ತಿಗಳ ಸಂಖ್ಯೆಯನ್ನು ತಿಳಿಸುವ ಶಬ್ದಗಳನ್ನು ವಚನ ಎಂದು ಹೇಳುತ್ತಾರೆ. ಒಂದು ವಸ್ತುವನ್ನು ಹೇಳುವುದು ಏಕವಚನ. ಅನೇಕ ವಸ್ತುಗಳನ್ನು ಹೇಳುವುದು ಬಹುವಚನ.
CHECK OUT FULL ಕನ್ನಡ ವ್ಯಾಕರಣ
‘ವಚನ’ ಎಂದರೆ ಸಂಖ್ಯೆ. ವಸ್ತುಗಳನ್ನು ಒಂದು ಅಥವಾ ಇನ್ನೂ ಹೆಚ್ಚಾಗಿ ಲೆಕ್ಕ ಹೇಳುವುದುಂಟು. ಅಂಥ ಸಮಯದಲ್ಲಿ ವಸ್ತು ಅಥವಾ ವ್ಯಕ್ತಿ ಒಂದಾಗಿದ್ದರೆ ಅಂಥದನ್ನು ‘ಏಕವಚನ’ ಎನ್ನುತ್ತೇವೆ. ಎರಡು ಅಥವಾ ಅದಕ್ಕಿಂತ ಹೆಚ್ಚಾಗಿದ್ದರೆ ‘ಬಹುವಚನ’
ಎನ್ನುತ್ತೇವೆ.
ಒಂದು ವಸ್ತು ಎಂದು ಹೇಳುವ ಶಬ್ದಗಳೆಲ್ಲ ಏಕವಚನಗಳು. ಒಂದಕ್ಕಿಂತ ಹೆಚ್ಚಾದ ವಸ್ತುಗಳೆಂದು ತಿಳಿಸುವ ಶಬ್ದಕ್ಕೆ ಬಹುವಚನವೆನ್ನುತ್ತೇವೆ.
ಕನ್ನಡ ಭಾಷೆಯಲ್ಲಿ ಏಕವಚನ ಬಹುವಚನಗಳೆಂದು ಎರಡೇ ವಚನಗಳು. ಸಂಸ್ಕೃತ ಭಾಷೆಯಲ್ಲಿ ಏಕವಚನ, ದ್ವಿವಚನ, ಬಹುವಚನಗಳೆಂದು ಮೂರು ಬಗೆಗಳುಂಟು. (ಕಣ್ಣುಗಳು, ಕಾಲುಗಳು, ಕೈಗಳು-ಇವು ದ್ವಿವಚನಗಳಾದರೂ ಇವಕ್ಕೆ ಕನ್ನಡದಲ್ಲಿ ದ್ವಿವಚನದ ಬೇರೆ ಪ್ರತ್ಯಯವಿಲ್ಲ. ಆದ್ದರಿಂದ ಒಂದಕ್ಕಿಂತ ಹೆಚ್ಚಾಗಿರುವುದೆಲ್ಲ ಬಹುವಚನವೆಂದೇ ಕರೆಯಲ್ಪಡುತ್ತವೆ).
ಉದಾಹರಣೆಗೆ:-
ಏಕವಚನ | ಬಹುವಚನ |
ಅರಸು | ಅರಸರು (ಅರಸು+ಅರು) |
ಅರಸಿ | ಅರಸಿಯರು (ಅರಸಿ+ಅರು) |
ನೀನು | ನೀವು (ನೀನು+ವು) |
ನಾನು | ನಾವು (ನಾನು+ವು) |
ಮರ | ಮರಗಳು (ಮರ+ಗಳು) |
ಕಿವಿ | ಕಿವಿಗಳು (ಕಿವಿ+ಗಳು) |
ಮನೆ | ಮನೆಗಳು (ಮನೆ+ಗಳು) |
ತಂದೆ | ತಂದೆಗಳು (ತಂದೆ+ಗಳು) |
ತಾಯಿ | ತಂದೆಗಳು (ತಂದೆ+ಗಳು) |
ಅಣ್ಣ | ಅಣ್ಣಂದಿರು (ಅಣ್ಣ+ಅಂದಿರು) |
ಮೇಲಿನ ಬಹುವಚನ ಉದಾಹರಣೆಗಳನ್ನು ಗಮನಿಸಿದಾಗ ಮುಖ್ಯವಾಗಿ ಗೊತ್ತಾಗುವ ವಿಷಯವೇನೆಂದರೆ -ನಾಮಪ್ರಕೃತಿಗಳನ್ನು ಬಹುವಚನದಲ್ಲಿ ಹೇಳಿದಾಗ ಅವುಗಳ ಮುಂದೆ ಅರು, ವು, ಗಳು, ಅಂದಿರು-ಇತ್ಯಾದಿ ಬಹುವಚನಸೂಚಕ ಆಗಮಗಳು ಬಂದಿರುವುವು.
ಈ ಬಹುವಚನಸೂಚಕ ಆಗಮಗಳು ಯಾವ ಸ್ಥಳದಲ್ಲಿ ಬರುತ್ತವೆ ಎಂಬುದನ್ನು ಗಮನಿಸಿರಿ:-
- ಪ್ರಕೃತಿ + ಆಗಮ + ಪ್ರತ್ಯಯ = ನಾಮಪದ
- ಅರಸು + ಗಳು + ಉ = ಅರಸುಗಳು
- ಅರಸು + ಗಳು + ಅನ್ನು = ಅರಸುಗಳನ್ನು
- ಅರಸು + ಗಳು + ಇಂದ = ಅರಸುಗಳಿಂದ
- ಅರಸು + ಅರುಗಳು + ಇಂದ = ಅರಸರುಗಳಿಂದ
- ಅಣ್ಣ + ಅಂದಿರು + ಇಗೆ = ಅಣ್ಣಂದಿರಿಗೆ
- ಅಣ್ಣ + ಅಂದಿರುಗಳು + ಇಗೆ = ಅಣ್ಣಂದಿರುಗಳಿಗೆ
- ತಂದೆ + ಅರುಗಳು + ಅನ್ನು = ತಂದೆಯರುಗಳನ್ನು
- ತಾಯಿ + ಅರುಗಳು + ಇಗೆ = ತಾಯಿಯರುಗಳಿಗೆ
ಈ ಉದಾಹರಣೆಗಳ ಮೇಲಿಂದ ತಿಳಿದುಬರುವುದೇನೆಂದರೆ ಮೇಲೆ ಹೇಳಿದ ಬಹುವಚನ ಸೂಚಕ ಆಗಮಗಳು ಪ್ರಕೃತಿಗೂ ಪ್ರತ್ಯಯಕ್ಕೂ (ನಾಮವಿಭಕ್ತಿಪ್ರತ್ಯಯಕ್ಕೂ) ಮಧ್ಯದಲ್ಲಿ ಬರುವುವೆಂಬಂಶ. ಹಾಗಾದರೆ ಮುಖ್ಯವಾಗಿ ಬರುವ ಈ ಆಗಮಗಳ ವಿಚಾರವನ್ನು ಕ್ರಮವಾಗಿ ತಿಳಿಯೋಣ.
ಬಹುವಚನದಲ್ಲಿ ಪ್ರಕೃತಿಗೂ ಪ್ರತ್ಯಯಕ್ಕೂ ಮಧ್ಯದಲ್ಲಿ ∗ಅರು, ಗಳು, ಅರುಗಳು, ಅಂದಿರು, ಅಂದಿರುಗಳು, ಇರು, ವಿರು, ವು, ಅವು, ಕಳು, ವರು-ಇತ್ಯಾದಿ ಆಗಮಗಳು ಬರುತ್ತವೆ.
ಉದಾಹರಣೆಗೆ:-
1. ‘ಅರು’ ಬರುವುದಕ್ಕೆ:-
ಪುಲ್ಲಿಂಗ ಸ್ತ್ರೀಲಿಂಗಗಳೆರಡರಲ್ಲೂ, ‘ಅರು’ ಆಗಮವು ಬರುವುದು.
- ಅರಸು + ಅರು + ಉ = ಅರಸರು
- ಅರಸು + ಅರು + ಅನ್ನು = ಅರಸರನ್ನು
- ಹುಡುಗ + ಅರು + ಇಂದ = ಹುಡಗರಿಂದ
ಇದರಂತೆ-ಹುಡುಗರು, ಹುಡುಗಿಯರು, ಮುದುಕರನ್ನು, ಮುದುಕಿಯರನ್ನು, ದಾಸಿಯರಿಂದ, ದಾಸಿಯರಿಗೆ, ದಾಸರಲ್ಲಿ, ದಾಸರಿಗೆ, ಕಿರಿಯರನ್ನು, ಕಿರಿಯರಿಂದ, ಕಿರಿಯರಿಗೆ, ಹಿರಿಯರು, ಹಿರಿಯರನ್ನು, ಹಿರಿಯರಲ್ಲಿ-ಇತ್ಯಾದಿಗಳು.
(2) ‘ಗಳು’ ಬರುವುದಕ್ಕೆ:-
ಈ ಆಗಮವು ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ ಮೂರರಲ್ಲೂ ಕೆಲವು ಕಡೆ ಬರುವುದುಂಟು.
(ಅ) ಪುಲ್ಲಿಂಗಕ್ಕೆ:
- ತಂದೆ + ಗಳು + ಉ = ತಂದೆಗಳು
- ತಂದೆ + ಗಳು + ಅನ್ನು = ತಂದೆಗಳನ್ನು
- ಗುರು + ಗಳು + ಇಂದ = ಗುರುಗಳಿಂದ
(ಆ) ಸ್ತ್ರೀಲಿಂಗಕ್ಕೆ:
- ಹೆಣ್ಣು + ಗಳು + ಉ = ಹೆಣ್ಣುಗಳು
- ಹೆಣ್ಣು + ಗಳು + ಅನ್ನು = ಹೆಣ್ಣುಗಳನ್ನು
- ಹೆಣ್ಣು + ಗಳು + ಇಂದ = ಹೆಣ್ಣುಗಳಿಂದ
ಇದರಂತೆ-ವಧುಗಳು, ಅಮ್ಮಗಳು, ಅಕ್ಕಗಳು-ಇತ್ಯಾದಿ.
(3) ಅರುಗಳು:-
ಪುಲ್ಲಿಂಗ ಸ್ತ್ರೀಲಿಂಗಗಳೆರಡರಲ್ಲೂ ಈ ‘ಅರುಗಳು’ ಎಂಬ ಆಗಮವು ಬಹುವಚನದಲ್ಲಿ ಬರುವುದು.
(ಅ) ಸ್ತ್ರೀಲಿಂಗಕ್ಕೆ:-
- ಸ್ತ್ರೀ + ಅರುಗಳು + ಉ = ಸ್ತ್ರೀಯರುಗಳು
- ಹೆಂಗಸರು + ಅರುಗಳು + ಅನ್ನು = ಹೆಂಗಸರುಗಳನ್ನು
- ತಾಯಿ + ಅರುಗಳು + ಇಂದ = ತಾಯಿಯರುಗಳಿಂದ
(ಆ) ಪುಲ್ಲಿಂಗಕ್ಕೆ:-
- ಪುರುಷ + ಅರುಗಳು + ಅನ್ನು = ಪುರುಷರುಗಳನ್ನು
- ಪುರುಷ + ಅರುಗಳು + ಇಗೆ = ಪುರುಷರುಗಳಿಗೆ
ಇದರಂತೆ-ದೊಡ್ಡವರುಗಳು, ಚಿಕ್ಕವರುಗಳು, ತಂದೆಯರುಗಳು, ವಿದ್ವಾಂಸರುಗಳು,
ಕಳ್ಳರುಗಳು, ಮೂರ್ಖರುಗಳು-ಇತ್ಯಾದಿ.
(4) ಅಂದಿರು:-
ಈ ಆಗಮವು ಪುಲ್ಲಿಂಗ ಸ್ತ್ರೀಲಿಂಗಗಳೆರಡರಲ್ಲೂ ಬರುವುದುಂಟು.
(ಅ) ಪುಲ್ಲಿಂಗಕ್ಕೆ:-
- ಅಣ್ಣ + ಅಂದಿರು + ಉ = ಅಣ್ಣಂದಿರು
- ಅಣ್ಣ + ಅಂದಿರು + ಅನ್ನು = ಅಣ್ಣಂದಿರನ್ನು
- ಅಣ್ಣ + ಅಂದಿರು + ಇಂದ = ಅಣ್ಣಂದಿರಿಂದ
ಇದರಂತೆ-ತಮ್ಮಂದಿರು, ಮಾವಂದಿರು, ಅಜ್ಜಂದಿರು-ಇತ್ಯಾದಿ.
(ಆ) ಸ್ತ್ರೀಲಿಂಗಕ್ಕೆ:-
- ಅಕ್ಕ + ಅಂದಿರು + ಉ = ಅಕ್ಕಂದಿರು
- ಅಕ್ಕ + ಅಂದಿರು + ಅನ್ನು = ಅಕ್ಕಂದಿರನ್ನು
ಇದರಂತೆ-ತಾಯಂದಿರು, ಅಮ್ಮಂದಿರು, ಸೊಸೆಯಂದಿರು-ಇತ್ಯಾದಿ.
(5) ಅಂದಿರುಗಳು:-
ಅಂದಿರು ಎಂಬ ಆಗಮವು ಬಂದಿರುವೆಡೆಗಳಲ್ಲೆಲ್ಲಾ ‘ಗಳು’ ಎಂಬುದು ಮುಂದೆ ಸೇರಿ ‘ಅಂದಿರುಗಳು’ ಎಂದು ಆಗುವುದುಂಟು.
ಉದಾಹರಣೆಗೆ:-
ಅಣ್ಣಂದಿರುಗಳು, ಅಕ್ಕಂದಿರುಗಳನ್ನು, ತಾಯಂದಿರುಗಳಿಗೆ, ತಮ್ಮಂದಿರುಗಳಲ್ಲಿ -ಇತ್ಯಾದಿ.
(6) ಇರು:-
ಹೆಂಡತಿ ಎಂಬ ಪ್ರಕೃತಿಯ ಮೇಲೆ ‘ಇರು’ ಎಂಬ ಆಗಮವು ಬಹುವಚನದಲ್ಲಿ ಬರುವುದು. ಆಗ ‘ತಿ’ ಎಂಬುದಕ್ಕೆ ಲೋಪ ಬರುವುದು.
- ಹೆಂಡತಿ + ಇರು + ಉ = ಹೆಂಡಿರು
- ಹೆಂಡತಿ + ಇರು + ಅನ್ನು = ಹೆಂಡಿರನ್ನು – ಇತ್ಯಾದಿ.
(7) ವಿರು:-
ಸ್ತ್ರೀಲಿಂಗದಲ್ಲಿ ಮಾತ್ರ ಕ್ವಚಿತ್ತಾಗಿ ಈ ಪ್ರತ್ಯಯವು ಆಗಮವಾಗಿ ಬರುವುದು.
ಉದಾಹರಣೆಗೆ:-
- ಅತ್ತೆವಿರು (ಅತ್ತೆವಿರ್ ಹಳಗನ್ನಡ ರೂಪ)
- ತಾಯ್ವಿರು (ತಾಯ್ವಿರ್ ಹಳಗನ್ನಡ ರೂಪ)
(8) ‘ವು’:-
ಕೇವಲ ಸರ್ವನಾಮ, ಗುಣವಾಚಕ, ನಪುಂಸಕಲಿಂಗ, ಬಹುವಚನ ದಲ್ಲಿ ಮಾತ್ರ ಈ ‘ವು’ ಎಂಬುದು ಆಗಮವಾಗಿ ಬರುವುದು. ಆಗ ಪ್ರಕೃತಿಯ ಕೊನೆಯ ಅಕ್ಷರವು (ವ್ಯಂಜನ ಸ್ವರ ಸಹಿತವಾದ ಗಣಿತಾಕ್ಷರವು) ಲೋಪವಾಗುವುದು.
ಉದಾಹರಣೆಗೆ:-
- ಅದು + ವು + ಉ = ಅವು (ದುಕಾರಲೋಪ)
- ಅದು + ವು + ಅನ್ನು = ಅವನ್ನು (ದುಕಾರಲೋಪ)
- ಯಾವುದು + ವು + ಅನ್ನು = ಯಾವುವನ್ನು (ದುಕಾರಲೋಪ)
- ಚಿಕ್ಕದು + ವು + ಅಕ್ಕೆ = ಚಿಕ್ಕವಕ್ಕೆ (ದುಕಾರಲೋಪ)
- ಚಿಕ್ಕದು + ವು + ಉ = ಚಿಕ್ಕವು (ದುಕಾರಲೋಪ)
- ದೊಡ್ಡದು + ವು + ಅನ್ನು = ದೊಡ್ಡವನ್ನು (ದುಲೋಪ)
- ಎಲ್ಲ + ವು + ಅನ್ನು = ಎಲ್ಲವನ್ನು ( ಇಲ್ಲಿ ಯಾವಲೋಪವೂ ಇಲ್ಲ)
ಮೇಲೆ ಹೇಳಿರುವ ‘ವು’ ಎಂಬ ಬಹುವಚನ ಸೂಚಕ ಆಗಮ ಬಂದಲ್ಲೆಲ್ಲ ‘ವು’ ಕಾರದ ಮುಂದೆ ‘ಗಳು’ ಎಂಬುದೂ ಸಾಮಾನ್ಯವಾಗಿ ಬರುವುದುಂಟು. ಆದರೆ ‘ಯಾವುದು?’ ಎಂಬ ಪ್ರಶ್ನಾರ್ಥಕ ಸರ್ವನಾಮದ ಮುಂದೆ ಬರುವುದಿಲ್ಲ.
ಉದಾಹರಣೆಗೆ:-
- ಅದು + ವು + ಗಳು + ಉ = ಅವುಗಳು
- ಅದು + ವು + ಗಳು + ಅನ್ನು = ಅವುಗಳನ್ನು
- ಅದು + ವು + ಗಳು + ಇಂದ = ಅವುಗಳಿಂದ
- ಅದು + ವು + ಗಳು + ಇಗೆ = ಅವುಗಳಿಗೆ
ಇದರಂತೆ-ದೊಡ್ಡವುಗಳು ಚಿಕ್ಕವುಗಳು ಎಲ್ಲವುಗಳು-ಇತ್ಯಾದಿ.
(9) ‘ಅವು’ :–
ನಪುಂಸಕಲಿಂಗದಲ್ಲಿ ಕೆಲವು ಕಡೆ ‘ಅವು’ ಎಂಬುದು ಆಗಮವಾಗಿ ಬರುವುದುಂಟು.
ಉದಾಹರಣೆಗೆ:-
- ಇನಿದು + ಅವು + ಉ = ಇನಿಯವು
- ಇನಿದು + ಅವು + ಅನ್ನು = ಇನಿಯವನ್ನು
- ಕಿರಿದು + ಅವು + ಅಕ್ಕೆ = ಕಿರಿಯವಕ್ಕೆ
- ಹಿರಿದು + ಅವು + ಅನ್ನು = ಹಿರಿಯವನ್ನು-ಇತ್ಯಾದಿಗಳು.
(10) ‘ಕಳು’:-
ಮಗು, ಮಗಳು, ಮಗ-ಈ ಮೂರು ಪ್ರಕೃತಿಗಳ ಮೇಲೆ ಬಹುವಚನ ದಲ್ಲಿ ‘ಕಳು’ ಎಂಬುದು ಆಗಮವಾಗಿ ಬರುವುದು. ಆಗ ಗು, ಗಳು, ಗ, ಎಂಬುದಕ್ಕೆ ‘ಕ್’ ಎಂಬ ಅಕ್ಷರ ಆದೇಶವಾಗುವುದು.
ಉದಾಹರಣೆಗೆ:-
- ಮಗು + ಕಳು + ಉ = ಮಕ್ + ಕಳು + ಉ = ಮಕ್ಕಳು
- ಮಗಳು + ಕಳು + ಇಂದ = ಮಕ್ + ಕಳು + ಇಂದ = ಮಕ್ಕಳಿಂದ
- ಮಗ + ಕಳು + ಅನ್ನು = ಮಕ್ + ಕಳು + ಅನ್ನು = ಮಕ್ಕಳನ್ನು-ಇತ್ಯಾದಿ
(11) ‘ವರು’:-
ಸಂಖ್ಯೇಯವಾಚಕಗಳಲ್ಲಿ ಮಾತ್ರ ‘ವರು’ ಎಂಬುದು ಆಗಮವಾಗಿ ಬರುವುದು.
ಉದಾಹರಣೆಗೆ:-
- ಮೂರು + ವರು + ಅನ್ನು = ಮೂವರನ್ನು
- ಮೂರು + ವರು + ಉ = ಮೂವರು
- ನಾಲ್ಕು + ವರು + ಇಂದ = ನಾಲ್ವರಿಂದ
ಇದರಂತೆ-ಇರ್ವರು, ಐವರು, ನೂರ್ವರು, ನಾಲ್ವರು, ಸಾಸಿರ್ವರು, ಐನೂರ್ವರು-ಇತ್ಯಾದಿ.
(ಇರ್ವರು ಎಂಬಲ್ಲಿ ಎರಡು ಎಂಬುದು ‘ಇರ್’ ಎಂದೂ, ಮೂವರು ಎಂಬಲ್ಲಿ ಮೂರು ಎಂಬುದು ‘ಮೂ’ ಎಂದೂ, ಸಾಸಿರ್ವರು ಎಂಬಲ್ಲಿ ಸಾಸಿರ ಎಂಬುದು ಸಾಸಿರ್ ಎಂದೂ ಉಳಿಯುವುದು. ಐನೂರ್ವರು ಎಂಬಲ್ಲಿ ಐನೂರ್ ಎಂದೂ ಉಳಿಯುವುದು.)
Conclusion:
ಕನ್ನಡ ವಚನಗಳು ( Kannada Vachanagalu) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.
FAQ:
ಕನ್ನಡ ಭಾಷೆಯಲ್ಲಿ ವಸ್ತು, ಪ್ರಾಣಿ, ಅಥವಾ ವ್ಯಕ್ತಿಗಳ ಸಂಖ್ಯೆಯನ್ನು ತಿಳಿಸುವ ಶಬ್ದಗಳನ್ನು ವಚನ ಎಂದು ಹೇಳುತ್ತಾರೆ. ಒಂದು ವಸ್ತುವನ್ನು ಹೇಳುವುದು ಏಕವಚನ. ಅನೇಕ ವಸ್ತುಗಳನ್ನು ಹೇಳುವುದು ಬಹುವಚನ.
ಸಮಗ್ರ ವಚನ ಸಾಹಿತ್ಯ ಕನ್ನಡದ ಸಾಹಿತ್ಯದ ಪ್ರಮುಖ ಪ್ರಕಾರಗಳಲ್ಲಿ ಒಂದು. ೧೧ನೇ ಶತಮಾನದ ಉತ್ತರಾರ್ಧದಲ್ಲಿ ಉದಯಿಸಿ ೧೨ನೇ ಶತಮಾನದ ಕಡೆಯವರೆಗೂ ಬಸವಣ್ಣನವರ-ಜನಸಾಮಾನ್ಯರ ಆಂದೋಲನದ ಭಾಗವಾಗಿ ಬೆಳೆದು ಬಂತು. ಇದು ಸಾಹಿತ್ಯ ಪರಿಭಾಷೆಯ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರದ ಕಾವ್ಯ.
ವಚನ ಸಾಹಿತ್ಯವನ್ನು, ವಚನಗುರು ಜೇಡರ ದಾಸಿಮಯ್ಯ ಮಾದಾರ ಚೆನ್ನಯ್ಯ ನವರ ಆದಿಯಾಗಿ ಬಸವಣ್ಣನವರು ಮತ್ತು ಅವರ ಸಮಕಾಲೀನ ಶರಣರು ನೀಡಿದರು.
ವಚನಗುರು ಮಾದಾರ ಚನ್ನಯ್ಯರವರು ೧೦ ರಿಂದ ೧೧ನೇ ಶತಮಾನದ ಬಸವ ಪೂರ್ವ ಯುಗದಲ್ಲಿಯೇ ಇದ್ದರು ಎಂದು ಸಂಶೋಧನೆಗಳ ಮೂಲಕ ತಿಳಿದುಬಂದಿದೆ. ಶಿವಮೊಗ್ಗ ಜಿಲ್ಲೆಯ ಬಿಳಿಗಾವಲು ಗ್ರಾಮದಲ್ಲಿ ಜನಿಸಿದ್ದರು ಎನ್ನಲಾಗಿದೆ. ಇವರು ರಚಿಸಿದ ಹಲವು ವಚನಗಳಲ್ಲಿ ೧೦ ವಚನಗಳು ಮಾತ್ರ ಲಭ್ಯವಾಗಿದೆ. ಮಾದಾರ ಚನ್ನಯ್ಯನವರು ವಚನಕಾರರಲ್ಲಿಯೇ ಮೊದಲಿಗರು ಎಂದು ತಿಳಿಯಲು ಜೇಡರ ದಾಸಿಮಯ್ಯ ತಮ್ಮ ವಚನಗಳಲ್ಲಿ ಸ್ಮರಿಸಿರುವುದನ್ನು ಕಾಣಬಹುದಾಗಿದೆ